ಗೋವಿಂದ ಚಂದ್ರ-
	ಗಾಹದ್ವಾಲ ಮನೆತನದ ಒಬ್ಬ ಪ್ರಮುಖ ದೊರೆ. ಈತ 1114 - 1154 ರವರೆಗೆ ಆಳಿದನೆಂದು ಹೇಳಬಹುದಾಗಿದೆ. ತನ್ನ ತಂದೆಯ ಕಾಲದಲ್ಲೇ ವಾರಣಾಸಿಯಲ್ಲಿ ಈತ ಯುವರಾಜನಾಗಿ ಆಳುತ್ತಿದ್ದ. ಮುಮ್ಮಡಿ ಅಲಾ - ಉದ್- ದೌಲಾ ಮಸುದ್ ಹಿಂದುಸ್ಥಾನದ ಮೇಲೆ ದಂಡೆತ್ತಿ ಬಂದಾಗ ಕನೌಜಿನಲ್ಲಿ ಆಳುತ್ತಿದ್ದ ಗಾಹದ್ವಾಲ ರಾಜನಾದ ಮದನ ಚಂದ್ರನನ್ನು ಸೆರೆ ಹಿಡಿದನೆಂದು ಮಹಮದಿಯರ ಗ್ರಂಥಗಳು ವರ್ಣಿಸುತ್ತವೆ. ಅನಂತರ ಆ ಸೈನ್ಯ ವಾರಣಾಸಿಯ ಕಡೆಗೆ ಹೊರಟಿತು. ಅಲ್ಲಿ ಆಳುತ್ತಿದ್ದ ಗಾಹದ್ವಾಲ ಯುವರಾಜ ಗೋವಿಂದಚಂದ್ರ ಮುಸ್ಲಿಂ ಸೈನ್ಯದ ವಿರುದ್ಧ ಹೊರಾಡಿ, ತನ್ನ ತಂದೆಯನ್ನು ಸೆರೆಯಿಂದ ಬಿಡಿಸಿ, ಮಹಮ್ಮದೀಯರ ಸೈನ್ಯವನ್ನು ಹೊಡೆದೋಡಿಸಿದ. ಗೋವಿಂದಚಂದ್ರ ಹರಿಯ ಅವತಾರವೆಂದೂ ವಾರಣಾಸಿಯನ್ನು ಮಹಮ್ಮದೀಯರ ದಾಳಿಯಿಂದ ರಕ್ಷಿಸಲು ಅವನು ಬಂದನೆಂದೂ ಗೋವಿಂದ ಚಂದ್ರನ ರಾಣಿ ಕುಮಾರ ದೇವಿಯ ಸಾರನಾಥ ಶಾಸನದಿಂದ ತಿಳಿದುಬರುತ್ತದೆ. 

	ಗೋವಿಂದ ಚಂದ್ರ ತ್ರಿಪುರಿಯ ಕಳಚೂರಿಗಳನ್ನು ಸೋಲಿಸಿ ಅವರ ಅಧೀನದಲ್ಲಿದ್ದ ರಾಜ್ಯವನ್ನೆಲ್ಲ ತನ್ನ ವಶಪಡಿಸಿಕೊಂಡ. ಕಳಚೂರಿ ರಾಜ ಯಶಃಕರ್ಣ ಶೈವಗುರುವಾದ ರುದ್ರಶಿವನಿಗೆ ನಿಡಿದ ದತ್ತಿಯನ್ನು ಗೋವಿಂದಚಂದ್ರ ಪುನಃ ಖಾಯಂಗೊಳಿಸಿದ. ಅಲ್ಲಿಯವರೆಗೆ ಕಳಚೂರಿ ರಾಜಮನೆತನ ಉತ್ತರ ಭಾರತದ ಸಾರ್ವಭೌಮತ್ವವನ್ನು ಪಡೆದಿತ್ತು. ಆಗ ಈ ಅಧಿಕಾರ ಗೋವಿಂದ ಚಂದ್ರನಿಗೆ ವರ್ಗವಾಯಿತು. ಗೋವಿಂದ ಚಂದ್ರ ಅಶ್ವಪತಿ- ಗಜಪತಿ- ನರಪತಿ- ರಾಜತ್ರಯಾದೀಪತಿ ಎಂಬ ಬಿರುದು ಧರಿಸಿದ. ಇದನ್ನು ಮೊತ್ತಮೊದಲಿಗೆ ಕಳಚೂರಿ ರಾಜಲಕ್ಷ್ಮೀಕರ್ಣ ಹೊಂದಿದ್ದ. ವಿ. ವಿ ಮಿರಾಸಿಯವರ ಪ್ರಕಾರ ಈ ಬಿರುದು ಗೂರ್ಜರ ಪ್ರತೀಹಾರರ ಕಳಿಂಗ ಗಂಗರ ಮತ್ತು ಬಂಗಾಳದ ಮೇಲೆ ಗೋವಿಂದ ಚಂದ್ರನ ಪರಮಾಧಿಕಾರವನ್ನು ಸಾರುತ್ತದೆ.

	ಕಳಚುರಿಗಳೇ ಅಲ್ಲದೇ ಗೋವಿಂದ ಚಂದ್ರ ಇತರ ರಾಜ್ಯಗಳ ವಿರುದ್ಧವಾಗಿಯೂ ಅನೇಕ ಯುದ್ಧಗಳನ್ನು ಮಾಡಿದ. 1143 ರಲ್ಲಿ ಬಂಗಾಳದ ರಾಜನಾದ ಮದನ ಪಾಲನಿಂದ ಬಿಹಾರದ ಮಾಂಘೀರ್ ವರೆಗೆ ಎಲ್ಲ ಪ್ರಾಂತ್ಯಗಳನ್ನು ಗೆದ್ದುಕೊಂಡ. ಆದರೆ ತನ್ನ ಕೊನೆಯ ದಿನಗಳಲ್ಲಿ ಮಾಂಘೀರ್‍ನ್ನು ಪಾಲ ರಾಜನಿಗೆ ಬಿಟ್ಟುಕೊಡಬೇಕಾಯಿತು. ಗೋವಿಂದ ಚಂದ್ರ ಪೂರ್ವ ಮಾಳವವನ್ನೂ ಗೆದ್ದುಕೊಂಡನೆಂದೂ ತಿಳಿದುಬರುತ್ತದೆ. ಪ್ರಾಕೃತ - ಪೈಂಗಾಲಂ ಗ್ರಂಥ ಗೋವಿಂದ ಚಂದ್ರನ ಅನೇಕ ಯುದ್ಧಗಳನ್ನು ವಿವರಿಸುತ್ತದೆ. ಈತ ಕಳಿಂಗದ ರಾಜನಾದ ಅನಂತವರ್ಮನ ಮೇಲೂ ಮೀಥಿಳೆಯ ನಾನ್ಯ ದೇವನ ಮೇಲೂ ಯುದ್ಧ ಮಾಡಿದನೆಂದು ಈ ಗ್ರಂಥ ವಿವರಿಸುತ್ತದೆ. ಅಲ್ಲದೆ ಕಾಕತೀಯ, ಚಾಳುಕ್ಯ ಮತ್ತು ಚೌಳುಕ್ಯರ ಮೇಲೂ ಯುದ್ಧ ಮಾಡಿದನೆಂದು ತಿಳಿದುಬರುತ್ತದೆ. 

	ಗೋವಿಂದ ಚಂದ್ರ ಕಾಶ್ಮೀರದ ರಾಜನಾದ ಜಯಸಿಂಹನ ಆಸ್ತಾನಕ್ಕೆ ರಾಯಭಾರಿಯನ್ನಾಗಿ ಸುಹಲನನ್ನು ಕಳುಹಿಸಿಕೊಟ್ಟ. ಚೋಳರ ರಾಜಧಾನಿಯಾಗಿದ್ದ ಗಂಗೈಕೊಂಡ ಚೋಳಪುರದಲ್ಲಿ ಸಿಕ್ಕಿರುವ ಒಂದು ಅಪೂರ್ಣ ಮತ್ತು ಅಪೂರ್ವ ಶಾಸನ ಚೋಳರಿಗೂ ಗಾಹದ್ವಾಲರಿಗೂ ಇದ್ದ ಸಂಬಂಧವನ್ನು ವಿವರಿಸುತ್ತದೆ. ಇದು ಸು. 1111ರ ಶಾಸನ. ಇದರಲ್ಲಿ ಗಾಹದ್ವಾಲ ವಂಶಾವಳಿ ಯಶೋವಿಗ್ರಹನಿಂದ ಹಿಡಿದು ಗೋವಿಂದ ಚಂದ್ರನವರೆಗೆ ತಿಳಿದು ಬರುತ್ತದೆ. ಈ ಶಾಸನವನ್ನು ಚೋಳ ರಾಜನನ್ನು ವಿವಾಹವಾಗಿದ್ದ ಗಾಹದ್ವಾಲ ರಾಜಕುಮಾರಿ ಹೊರಡಿಸಿರಬಹುದೆಂದೂ ಯಾವುದೋ ಒಂದು ದತ್ತಿಯನ್ನು ಕೊಡುವ ಸಮಯದಲ್ಲಿ ತನ್ನ ಮನೆತನದ ವಂಶಾವಳಿಯನ್ನು ಕೆತ್ತಿಸಿರಬಹುದೆಂದೂ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

	ಗೋವಿಂದಚಂದ್ರ ಕಳಚೂರಿ ನಾಣ್ಯಗಳ ಮಾದರಿಯ ಹೊಸ ಚಿನ್ನ, ಬೆಳ್ಳಿ ಮತ್ತು ತಾಮ್ರ ನಾಣ್ಯಗಳನ್ನು ಅಚ್ಚು ಹಾಕಿಸಿದ. ಈತ ಯುದ್ಧಕುಶಲಿ ಮತ್ತು ರಾಜ ತಂತ್ರನಿಪುಣ ಮಾತ್ರವೇ ಅಲ್ಲ ; ಸಾಹಿತ್ಯದಲ್ಲೂ ಅಭಿರುಚಿ ಹೊಂದಿದ್ದ. ಸಾಹಿತ್ಯಕ್ಕೆ ಪ್ರೋತ್ಸಾಹ ನಿಡಿದ ಗೋವಿಂದ ಚಂದ್ರನನ್ನು ವಿವಿಧ ವಿದ್ಯಾವಿಚಾರ ವಾಚಸ್ಪøತಿ ಎಂದು ಶಾಸನಗಳಲ್ಲಿ ವರ್ಣಿಸಲಾಗಿದೆ. ಈತನ ಮಂತ್ರಿಯಾಗಿದ್ದ ಲಕ್ಷ್ಮೀಧರ, ಕೃತ್ಯಕಲ್ಪತರು ಎಂಬ ಗ್ರಂಥವನ್ನು ಗೋವಿಂದ ಚಂದ್ರ ಆಜ್ಞೆಯ ಮೇರೆಗೆ ರಚಿಸಿದ.				(ಎಸ್.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ